ಪ್ಯುರೀನುಗಳು
ಸಾರಜನಕ ಯುಕ್ತ ಕಾರ್ಬನಿಕ ಸಂಯುಕ್ತಗಳ ದೊಡ್ಡ ಗುಂಪು. ಇವುಗಳ ಪೈಕಿ ಕೆಲವು ಮಾತ್ರ ಸಸ್ಯಗಳಲ್ಲೂ ಪ್ರಾಣಿಗಳಲ್ಲೂ ದೊರೆಯುತ್ತವೆ. ಉಳಿದವೆಲ್ಲ ಕೃತಕವಾದವು. ನೀರಿನಲ್ಲಿ ವಿಲೀನವಾಗುವ ವರ್ಣರಹಿತ ಸ್ಫಟಿಕರೂಪಿ ಸಂಯುಕ್ತಗಳಿವು. ಪ್ಯುರೀನುಗಳು ಈ ಕೆಳಗಿನ ರಚನಾ ಸೂತ್ರವಿರುವ ಪ್ಯುರೀನಿನ ಜನ್ಯ ಸಂಯುಕ್ತಗಳೆಂದು ಪರಿಗಣಿಸಲಾಗಿದೆ. 

ಚಿತ್ರ-1

	ಜೀವ ವಿಜ್ಞಾನದ ಪ್ರಕಾರ ಅತ್ಯಂತ ಪ್ರಮುಖ ಪ್ಯುರೀನ್ ಎಂದರೆ ಯೂರಿಕ್ ಆಮ್ಲ (ಅ5ಊ4ಓ4ಔ3) ಇದು ನೀರಿನಲ್ಲಿ ಸ್ವಲ್ಪವೇ ವಿಲೀನವಾಗಬಲ್ಲ ಬಿಳಿಯ ಬಣ್ಣದ ರುಚಿ ಮತ್ತು ವಾಸನೆಗಳಿಲ್ಲದ ಸ್ಫಟಿಕರೂಪಿ ಸಂಯುಕ್ತ. ಇದನ್ನು ಸ್ವೀಡನ್ನಿನ ರಸಾಯನಶಾಸ್ತ್ರಜ್ಞ ಕಾರ್ಲ್‍ವಿಲ್‍ಹೇಲ್ಮ್‍ಷೆಲ್ (1742-1786) ಮಾನವ ಮೂತ್ರಕೋಶದಲ್ಲಿ ಉಂಟಾದ ಕಲ್ಲಿನಲ್ಲಿ ಶೋಧಿಸಿದ (1776). ಹಕ್ಕಿಗಳ ಮತ್ತು ಹರಿದಾಡುವ ಜಂತುಗಳ ಮಲದಲ್ಲಿ ಮತ್ತು ದಕ್ಷಿಣ ಅಮೆರಿಕದ ಕೆಲವು ಕಡೆಗಳಲ್ಲಿ ಕಂಡುಬರುವ ಕಡಲುಕೋಳಿಗಳ ಹಿಕ್ಕೆ ಗ್ವಾನೋದಲ್ಲಿ ಇದು ದೊರೆಯುತ್ತದೆ. ಪ್ರೋಟೀನ್ ಉಪಾಪಚಯದ ಮುಖ್ಯ ಸಾರಜನಕಯುಕ್ತ ಉತ್ಪತ್ತಿ ಇದು. ಮಾನವ ದೇಹದ ಕೋಶಗಳ ವಿಚ್ಛೇದನೆಯ ಉತ್ಪತ್ತಿಯಾಗಿ ಇದು ರಕ್ತ, ಉಗುಳು, ಮಿದುಳುಬಳ್ಳಿಯ ದ್ರವ ಇವುಗಳಲ್ಲಿ ಕಂಡುಬರುತ್ತದೆ. 

ಚಿತ್ರ-2

ಇದು ಮೂತ್ರ ಮಾರ್ಗವಾಗಿ ವಿಸರ್ಜನೆಗೊಳ್ಳುತ್ತದೆ. ಮಾಂಸಾಹಾರದಲ್ಲಿಯ ಕೋಶಗಳ ವಿಚ್ಛೇದನೆಯಿಂದ ಉಂಟಾಗುವ ಪ್ಯುರೀನುಗಳು ಸಹ ಇದೇ ರೂಪದಲ್ಲಿ ಮೂತ್ರ ಮಾರ್ಗವಾಗಿ ವಿಸರ್ಜನೆಗೊಳ್ಳುತ್ತವೆ. ಕೆಲವೊಂದು ರೋಗವಿಕಾರಗಳಲ್ಲಿ ಇದರ ಮೊತ್ತ ಅತಿ ಹೆಚ್ಚಾಗುತ್ತದೆ. ಉದಾಹರಣೆಗೆ ಸಂಧಿವಾತದಿಂದ ಬಳಲುವ ರೋಗಿಯ ದೇಹದಲ್ಲಿ ಈ ಹೆಚ್ಚಿನ ಯೂರಿಕ್ ಆಮ್ಲ ಕೀಲು ಮತ್ತು ಮೃದ್ವಸ್ಥಿ ಇವುಗಳಲ್ಲಿ ಮೊನೋಸೋಡಿಯಮ್ ಲವಣದ ಸ್ಫಟಿಕ ರೂಪದಲ್ಲಿ ಪ್ರಕ್ಷೇಪಗೊಳ್ಳುವುದರಿಂದ ಕೀಲುಗಳಲ್ಲಿ ಬಾಹು ಅಥವಾ ಗಂಟುಗಳಾಗಿ ವಿಪರೀತ ಉರಿಯೂತ ಮತ್ತು ನೋವಿಗೆ ಕಾರಣವಾಗುತ್ತದೆ. 1875 ರಲ್ಲಿ ಮೆಡಿಕಸ್ ಎಂಬಾತ ಇದರ ರಚನಾ ಸೂತ್ರವನ್ನು ಶೋಧಿಸಿದ. ಇದರಲ್ಲಿ ಸಹ ಸುಲಭವಾಗಿ ಸ್ಥಾನಪಲ್ಲಟವಾಗಬಲ್ಲ ಜಲಜನಕ ಪರಮಾಣುಗಳಿವೆ. ಯೂರಿಕ್ ಆಮ್ಲಕ್ಕೆ ಕೆಳಗಿನ ಮೂರು ಪರಸ್ಪರ ಸಮಾನ ರಚನಾ ಸೂತ್ರಗಳಿವೆ. 

	ಹೈಪೊಝಾಂತೀನ್ ಅಥವಾ 6- ಹೈಡ್ರಾಕ್ಸಿ ಪ್ಯುರೀನನ್ನು 1850 ರಲ್ಲಿ ಷೆರರ್ ಗುಲ್ಮದ ಸತ್ತ್ವದಲ್ಲಿ ಪರಿಶೋಧಿಸಿದ. ಇದು ಕೋಶಗಳ ವಿಚ್ಛೇದನೆಯ ಫಲವಾಗಿ ನ್ಯೂಕ್ಲಿಯಿಕ್ ಆಮ್ಲಗಳು ಜಲವಿಶ್ಲೇಷಣೆಗೊಂಡಾಗ ಉತ್ಪತ್ತಿಯಾಗಿ ಬಲುಮಟ್ಟಿಗೆ 	ಎಲ್ಲ ಸಸ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತದೆ. ಝಾಂತೀನ್ ಅಥವಾ 2,6- ಡೈ ಹೆಡ್ರಾಕ್ಸಿ ಪ್ಯುರೀನನ್ನು ಮೂತ್ರಕೋಶದಲ್ಲಾಗುವ ಕಲ್ಲಿನಲ್ಲಿ ಮಾರ್ಶಲ್ ಶೋಧಿಸಿದ (1817). ಇದು ರಕ್ತ ಮತ್ತು ಮೂತ್ರಗಳಲ್ಲಿ ಅಲ್ಲದೆ ಚಹ ತಪ್ಪಲು, ಬೀಟ್‍ಗಡ್ಡೆಯ ರಸ ಮತ್ತು ಚಿಗುರುತ್ತಿರುವ ಲ್ಯುಪಿನ್ ಅಗೆಗಳಲ್ಲಿ ಸಹ ದೊರೆಯುತ್ತದೆ. ಅಡೆನೀನ್ ಅಥವಾ 6- ಅಮೀನೋ ಪ್ಯುರೀನನ್ನು ಕೋಸೆಲ್ ಶೋಧಿಸಿದ (1884). ಇದು ಚಹಾದ ತಪ್ಪಲು, ಅಲ್ಫಾಲ್ಫಾ ತಪ್ಪಲು ಬೀಟ್‍ಗಡ್ಡೆಯ ರಸಗಳಲ್ಲಿ ಕಂಡುಬರುತ್ತದೆ. ನ್ಯೂಕ್ಲಿಯಿಕ್ ಆಮ್ಲಗಳ ಒಂದು ಭಾಗವಿದು. ಇದನ್ನು ಅವುಗಳ ಆಮ್ಲಗಳ ಆಮ್ಲಿಕ ಜಲವಿಶ್ಲೇಷಣೆಯಿಂದ ಪಡೆಯಬಹುದು. ಗ್ವಾನೀನ್ ಅಥವಾ 2- ಅಮೀನೋ -6 ಹೈಡ್ರಾಕ್ಸಿ ಪ್ಯುರೀನ್ ಎಂಬುದನ್ನು ಉಂಗರ್ ಎಂಬಾತ ಗ್ವಾನೋದಲ್ಲಿ ಶೋಧಿಸಿದ (1845). ಗ್ವಾನೋದಲ್ಲಿ ಅಲ್ಲದೆ ಇದು ಮೀನುಗಳ ಚಕ್ಕೆ, ದ್ವಿದಳಧಾನ್ಯಗಳು, ಚಿಗುರುತ್ತಿರುವ ಲ್ಯುಪಿನ್ ಅಗೆಗಳು ಮತ್ತು ಯಕೃತ್ತು, ಮೇದೊಜೀರಕಾಂಗ, ಗುಲ್ಮ, ವೃಷಣ ಮೊದಲಾದ ಕೋಶಭರಿತ ಅಂಗಗಳು ಮತ್ತು ಸಸ್ಯಗಳ ಮೊಳಕೆ ಮುಂತಾದವಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇದರ ಬಳಿ ಸ್ಫಟಿಕಗಳಿಗೆ ಮುತ್ತಿನ ಹೊಳಪು ಇರುವುದರಿಂದ ಇದನ್ನು ಕೃತಕ ಮುತ್ತುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. 					 (ಜಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ